Monday, May 25, 2020

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ!



ಮನದ ಗರ್ಭದೊಳಗೆ,
ಭಾವ ಬೀಜ ಮೊಳೆತು,
ಪದದ ಭ್ರೂಣ ಬಲಿಯುವ
ಮೊದಲೇ ಗರ್ಭಪಾತ..
'ಬಂಜೆ' ಮನಕೆ ಒಂದೂ ಉಳಿಯಲಿಲ್ಲ,
ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ.

ಅಲ್ಲೇ ಮೂಲೆಯಲೆಲ್ಲೋ,
ಕೊಳಲಿನ ನಾದ,ಆಗೊಮ್ಮೆ ಈಗೊಮ್ಮೆ.
ಗೆಜ್ಜೆಯೂ ಅಲ್ಲೇ ಇದೆ..
ಏನೋ ತಡೆ, ಹೆಜ್ಜೆ ಹಾಕಲು ಒಮ್ಮೆ.

ನಾದ ಹೊಮ್ಮುತ್ತಿಲ್ಲ,
ಮೌನವಾಗಿದೆ ವೀಣೆ
ಬೆರಳುಗಳು ಬಂಧಿ,
ಯಾವುದೋ ಬಂಧನದೊಳಗೆ.

ಮನದ ಪರದೆಯ ಮೇಲೆ
ಚಿತ್ತಾರವಿಲ್ಲ.
ಬಣ್ಣ ಮಾಸಿದ ನೂರಾರು ರೇಖೆಗಳು,
ಅವು ಅರ್ಥವಾಗುವುದಲ್ಲ.

ಈಗಿಲ್ಲ,ಮೊದಲಿದ್ದ ಕಲ್ಪನಾವಿಲಾಸ,
ಒಣಗಿತೇಕೋ ಈಗೆಲ್ಲ ಭಾವರಸ?
ಈಗಿಲ್ಲ, ಭಾವನೆಗಳ ವಿದ್ಯುದಾಲಿಂಗನ,
ಪದದೊಡನೆ ಪದಗಳ ಆ ಸಮ್ಮಿಲನ.

ಮೊದಲೆಲ್ಲ  ಗಾಳಿಯೂ
ಪದಗಳ ಹೊತ್ತು ಬರುತ್ತಿತ್ತು,
ಸಮಯದ ಅರಿವಿಲ್ಲದೆ ಸಾಲಾಗುತ್ತಿತ್ತು.
ಎಲ್ಲೋ  ಜಾರಿದೆ  ಆ ಸಮಯ,
ಮತ್ತೆ ಸಿಕ್ಕುತ್ತಿಲ್ಲ.
ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ.
             
              ಜಿತೇಂದ್ರ ಬೇದೂರು.

Saturday, June 23, 2018

ರಾಧೆಯ ರಮಿಸಿದ ಮಾಧವ...

ರಾಧೆಯ ರಮಿಸಿದ ಮಾಧವ...

ಅರೆಘಳಿಗೆ ತಡವಾಯ್ತು
ದಡದಡನೆ ಧಾವಿಸಿ,
ತುಟಿಯ ನೊಸಲಿಗೆ ಒತ್ತಿ,
ತೊಳಿಂದ ಅವಳ ಕೊರಳ ಸುತ್ತಿ,
ಅವಳ ರಮಿಸುತಿಹನು
ಇವನೇ ಮಾಧವ.

ಹುಸಿ ಮುನಿಸು ತೋರಿದಳು,
ತುಸು ಕೋಪ ನಟಿಸಿದಳು,
ಒಳಗೊಳಗೇ ಕರಗುವಳು,
ಇವಳು ರಾಧೆ..

ಇವನ ಕಣ್ಣಲಿ ಅವಳು,
ಅವಳ ಕಣ್ಣಲಿ ಇವನು,
ಇನ್ನೆಲ್ಲಿ ಉಂಟು ಜಗದ ಧ್ಯಾನ?
ಅವನ ಎದೆಗೊರಗಿ ಕುಳಿತು
ಆಡುತಿಹಳು ಪಿಸುಮಾತು
ಮಂದ್ರದಲಿ ನುಡಿಸಿತ್ತು ಮುರಳಿ ಗಾನ

ಕೃಷ್ಣ ಭಾನು, ರಾಧೆ ಭೂಮಿ,
ಅವಳೆಡೆಗೆ ಇವನು ಬಾಗಿ,
ಮುತ್ತನಿತ್ತ, ಅದರಗಳಿಗೆ,
ರಾಧೆ ನಾಚಿ ಕೆಂಪಾದಳು.

ಪ್ರೀತಿ ಹರಡಿತು ಸುತ್ತಲೆಲ್ಲ,
ಗಾಳಿ ತೆವಳುತಿತ್ತು ಮೆಲ್ಲ,
ಅವಳು ಅರಳಿ ಹೂವಾದಳು.
ಮುಗಿಲ ಹಿಂದೆ ಅಡಗಿ ಕುಳಿತು,
ಇಣುಕಿ ನೋಡುತ್ತಿದ್ದ ಚಂದ್ರ,
ಯಮುನೆ ನಾಚಿ ನೀರಾದಳು.

ಅಂದಿಗೂ,ಇಂದಿಗೂ ,
ನಂದದೇ ಉರಿಯುತಿದೆ
ರಾಧೆ ಹಚ್ಚಿದ ಪ್ರೀತಿ ದೀಪ
ಅಂದು,ಇಂದೂ,ಮುಂದೂ,
ಅವತರಿಸುತಿಹರಿಲ್ಲಿ,
ರಾಧಾಮಾಧವರದ್ದು ವಿವಿಧ ರೂಪ.

                  ಜಿತೇಂದ್ರ ಬೇದೂರು.


Sunday, October 23, 2016

ಬಿಕರಿಗಿವೆ ಇಲ್ಲಿ ನೂರೆಂಟು ಮನಸುಗಳು,
ಮನಸು ಮಾರುವ ಸಂತೆ ಇದು.

ಖರೀದಿಸಿಬಿಡಿ ಬೇಗ,
ಬೆಲೆ ಏರೀತು ಜೋಕೆ!..
ನಿಮ್ಮ ಸಿರಿವಂತಿಕೆಗೆ ಬರಿ
ಒಂದೇ ಸಾಕೇ?..

ಹಿಗ್ಗುವವು,ಕುಗ್ಗುವವು,
ಬೇಕಾದಂತೆ ಬಗ್ಗುವವು,
ಸತ್ಯ,ಮಿಥ್ಯೆಗಳ ಹಂಗಿಲ್ಲ,
ಲಾಭದೆಡೆ ನುಗ್ಗುವವು.

ಎಸ್ಟು ಹೊಳೆಯುತಿವೆ ನೋಡಿ,
ಏನು  ಥಳಕು ಬಳುಕು.
(ಶ್.. ಕೆದಕಲೇ ಬೇಡಿ ಒಳಗೆ ಹುಳುಕು,
ಮುಖವಾಡದ ಬದುಕು).

........,........ಜಿತೇಂದ್ರ.

Sunday, May 29, 2016

ಕಡಲು

ಕಡಲಿಗೋ ತವಕ..
ದಡಕೆ ಮುತ್ತಿಡಲು...
'ಕಾದು' ಕುಳಿತಿವೆ..
ದಡದ ಕಣಕಣವೂ...

ಅಲೆಗಳಿಗೆ ಚಂದ್ರನ
ಭರಸೆಳೆವ ಬಯಕೆ.
ಕೆಂಪು ಆಗಸದ ಕೆನ್ನೆ,
ನೆರಳಿಗೂ ನಾಚಿಕೆ...

ಕಾದ ಮರಳ,ನುಣುಪು ಕೊರಳ,
ತಡವಿ,ರಭಸವಡಗಿ..
ಮತ್ತೆ ಭರನೆ ಬರುವ ಅಲೆಗಳವು,
ಎಲ್ಲಿ ಇರುವವೋ ಅಡಗಿ..?

ಮನವೇಕೋ ಹಕ್ಕಿ-ಹಗುರ,
ರೆಕ್ಕೆ ಬಿಚ್ಚುವ ಆತುರ.
ಯಾವ  ಗಾಳಿಯ ಯೋಜನೆ..
ಯಾವ 'ತೀರದ' ಕಾಮನೆ..?

ಏರಿ ಇಳಿವ ಅಲೆಗಳೊಂದಿಗೆ
ಮನಸು ಇಂದೂ ತುಡಿದಿದೆ..
ಮನದ ಕಡಲ ಒಡಲಿನಲ್ಲಿ,
ಮೊರೆಯದಲೆಗಳೂ ಅಡಗಿವೆ.

                              ....ಜಿತೇಂದ್ರ ಇಮ್ಮಡಿ.

Sunday, February 21, 2016

ದಾರಿ ತೋರುತಿದೆ ಯಾರೋ ಹಚ್ಚಿದ ಹಣತೆ,
ಕಣ್ಣ ಒರೆಸುತಿದೆ  ಯಾರದೋ ಕವಿತೆ.
ಬಳಲಿ ಬೆಂಡಾಗಿ,ಭಾವ ಒಣಗಿರುವಾಗ,
ಹಸಿರತಂದಿದ್ದು ಯಾವ ಒರತೆ?.

ದಾರಿಯುದ್ದಕ್ಕೂ ಯಾರು ಚೆಲ್ಲಿದ ನೆರಳು
ದನಿಗೂಡಿಸಿದ್ದು ಎಸ್ಟೊಂದು ಕೊರಳು.
ತುತ್ತ ನೀಡಿದ್ದು ಇನ್ಯಾರೋ ಬಸಿದ ಬೆವರು....

ಯಾರು ತುಂಬಿದ ಬಣ್ಣವೋ ಏನೋ,
ರಂಗಾಗಿದೆ ಬಾಳ ರಂಗವಲ್ಲಿ,
ಬಣ್ಣ ಮಾಸಲೂಬಹುದು ಮುಂದೆ,
ಆದರೂ ಬದುಕು ಚೆಂದವಿಲ್ಲಿ.

ಯಾರೋ ನೀಡಿದ ಹೆಸರು,
ಯಾರದೋ ಉಸಿರು,
ನಾನೆಂಬುದೊಂದು ನೆಪಮಾತ್ರವಿಲ್ಲಿ.

Sunday, January 10, 2016

.......


ನಿನ್ನ ತಿಳುವಳಿಕೆಗೆ  ನಾನು ಜವಾಭ್ದಾರನಲ್ಲ,
ನನ್ನ  ಹೇಳಿಕೆಗಸ್ಟೇ,
ನಿನ್ನ ಕಲ್ಪನೆಯ ಪರಿಪೂರ್ಣತೆಯ ಮಾದರಿಯೂ ನಾನಲ್ಲ,
ನನ್ನ  ಇರುವಿಕೆ ಇಸ್ಟೇ....

ನನ್ನಳತೆಗೇ ನಾನು ಸಿಗದಿರುವಾಗ,
ನೀ ಹೇಗೆ  ಅಳೆಯುವೆ ನನ್ನ?
ನಾನಾರೆಂದು ನನಗೇ  ತಿಳಿದಿಲ್ಲ,
ನೀ ಹೇಗೆ  ಗುರುತಿಸಿವೆ ನನ್ನ?

ಅವನೋ,ಇವನೋ,ಇನ್ಯಾರೋ ಆಗಬೇಕಿಲ್ಲ ನಾನು, ನನ್ನಸ್ಟಕ್ಕೆ ಬಿಡು ನಾನಗುವೆ ಮೊದಲು.
ಚಂದಿರನೇ ಬೇಕಿಲ್ಲ,ಪುಟ್ಟ ಹಣತೆಯು ಸಾಕು ಕತ್ತಲು ಕಳೆಯಲು.

ಬದುಕುತಿದೆ ಜಗವು,ಅವರಿವರ ಮೆಚ್ಚಿಸಲು ಭಾವಗಳ ಸುಟ್ಟು
ಬದುಕಬೇಕೆ ನಾವು ಮುಖವಾಡ ತೊಟ್ಟು?.