Saturday, June 23, 2018

ರಾಧೆಯ ರಮಿಸಿದ ಮಾಧವ...

ರಾಧೆಯ ರಮಿಸಿದ ಮಾಧವ...

ಅರೆಘಳಿಗೆ ತಡವಾಯ್ತು
ದಡದಡನೆ ಧಾವಿಸಿ,
ತುಟಿಯ ನೊಸಲಿಗೆ ಒತ್ತಿ,
ತೊಳಿಂದ ಅವಳ ಕೊರಳ ಸುತ್ತಿ,
ಅವಳ ರಮಿಸುತಿಹನು
ಇವನೇ ಮಾಧವ.

ಹುಸಿ ಮುನಿಸು ತೋರಿದಳು,
ತುಸು ಕೋಪ ನಟಿಸಿದಳು,
ಒಳಗೊಳಗೇ ಕರಗುವಳು,
ಇವಳು ರಾಧೆ..

ಇವನ ಕಣ್ಣಲಿ ಅವಳು,
ಅವಳ ಕಣ್ಣಲಿ ಇವನು,
ಇನ್ನೆಲ್ಲಿ ಉಂಟು ಜಗದ ಧ್ಯಾನ?
ಅವನ ಎದೆಗೊರಗಿ ಕುಳಿತು
ಆಡುತಿಹಳು ಪಿಸುಮಾತು
ಮಂದ್ರದಲಿ ನುಡಿಸಿತ್ತು ಮುರಳಿ ಗಾನ

ಕೃಷ್ಣ ಭಾನು, ರಾಧೆ ಭೂಮಿ,
ಅವಳೆಡೆಗೆ ಇವನು ಬಾಗಿ,
ಮುತ್ತನಿತ್ತ, ಅದರಗಳಿಗೆ,
ರಾಧೆ ನಾಚಿ ಕೆಂಪಾದಳು.

ಪ್ರೀತಿ ಹರಡಿತು ಸುತ್ತಲೆಲ್ಲ,
ಗಾಳಿ ತೆವಳುತಿತ್ತು ಮೆಲ್ಲ,
ಅವಳು ಅರಳಿ ಹೂವಾದಳು.
ಮುಗಿಲ ಹಿಂದೆ ಅಡಗಿ ಕುಳಿತು,
ಇಣುಕಿ ನೋಡುತ್ತಿದ್ದ ಚಂದ್ರ,
ಯಮುನೆ ನಾಚಿ ನೀರಾದಳು.

ಅಂದಿಗೂ,ಇಂದಿಗೂ ,
ನಂದದೇ ಉರಿಯುತಿದೆ
ರಾಧೆ ಹಚ್ಚಿದ ಪ್ರೀತಿ ದೀಪ
ಅಂದು,ಇಂದೂ,ಮುಂದೂ,
ಅವತರಿಸುತಿಹರಿಲ್ಲಿ,
ರಾಧಾಮಾಧವರದ್ದು ವಿವಿಧ ರೂಪ.

                  ಜಿತೇಂದ್ರ ಬೇದೂರು.